Monday, March 8, 2010

ಚಂದ ಮಾಮ ಬರನು ಅದು ತಾಯಿಗೆ ಗೊತ್ತು
ಕರೆದೂ ಕರೆದು ಮಗುವಾಯಿತ್ತು ಸುಸ್ತು
ಮಗುವಾಗಿದ್ದಾಗ ಮಾವನಾಗಿದ್ದ ಚಂದ್ರ 
ಈಗ ತಾಯಿಗೆ ಅಣ್ಣ, ತನ್ನ ಮಗುವಿಗೆ ಮಾವ

ಅವಳಿಗೂ ಗೊತ್ತು ತಾನು ಸುಳ್ಳಿ ಎಂದು
ಚಂದ್ರನ ತೋರಿಸಿಯೇ ತರಿಸಿದೆನೆಂದು
ನಂಬಿಸುವಳು ಮಗುವ. ತಂದೆ ನಗುವ.
ಅವನು ಅಷ್ಟೇ, ಒಂದೇ ಒಂದು ದಿನ ಹಾಗೆ...
ಅಮ್ಮನ ಹಾಗೆ ತಟ್ಟೆಯಲಿ ನೀರ್ಹಾಕಿ
ಚಂದ್ರನ ತರೆಸಿಲ್ಲ ಅವ- ಮಹಾ ಸೋಂಬೇರಿ

ಕೃಷ್ಣನಿಗೆ ಯಶೋಧೆ ಗುಮ್ಮನ ತೋರಿಸಿದಳೆಂದು
ಆ ಯಶೋಧೆಯಾನೆ ಬಯ್ಯುವಳು ಇವಳು
'ಛೆ! ತನ್ನ ಕಂದಮ್ಮನಿಗೇ ಗುಮ್ಮನ ತೋರಿಸುವುದೇ?
ಎಂಥ ತಾಯಿ?'

ಮಗು ಅಮ್ಮ ಅಮ್ಮ ಎಂದು ಬಾಯಿ ನೊಂದು ಮಲಗಿದಾಗ
ತಾಯ ಕಣ್ಣು ನೊಂದು, ನೀರು ಬತ್ತಿ
ಬಿಕ್ಕಳಿಸಿರಲಿಕ್ಕೂ  ಸಾಕು.
ಪ್ರೀತಿಯೋ, ವಾತ್ಸಲ್ಲವೋ,ಮಾಯೆಯೋ
ಅಂದ ದಲ್ಲ್ಲಾ ತಪ್ಪು, ಕರೆದದ್ದೆಲ್ಲ ಸರಿ

ಕಪ್ಪೋ ಬಿಳುಪೋ
ಶಾಂತಸಾಗರದ ನೀಲಿಯೋ ಬಣ್ಣ?
ಬರೀ ಕಣ್ಣ ಬೆರಗಿಗೆ ಹಿಗ್ಗಿ  ಸೋತವಳಿಗೆ
ಯಾವುದಾದರೇನು ಬಣ್ಣ.
ಕಾಲನೋದ್ದು ಹಾಲು ಕುಡಿವಾಗ ಆದ ಆನಂದ
ದೈವ ಲೀಲೆ!

ಕುಂಡೆಯೂರಿ  ಕೂತು, ಮೊಂಡೆಯೂರಿ ನಡೆದು
ಒಂದೊಂದೇ ಹೆಜ್ಜೆ ಇಟ್ಟು, ಎರಡಕ್ಷರದ ಮಾತಾಡಿ 
ತನ್ನ ಬಾಲಲೇಲೆಗಳನಾಡಿ, ನಾಲ್ಕಕ್ಷರದ ಮಾತು
ಕಲಿಯುವದರಲೇ ತಾಯ ಋಣ ತೀರಿಸಿತು ಮಗು
ಮಹಾದಾನಂದ ಸಾಗರವನೇ ಕುಡಿಸಿ
ತಾಯಿಗೆ ಹೆರಿಗೆ ನೋವ ಮರೆಸಿ







  

1 comment:

ಗುರು said...

ತಾಯಿಯ ಋಣ ತೀರಿಸುವ ಮತ್ತೊಂದು ಬಗೆಯನ್ನು ತೋರಿಸಿದ್ದೆರಿ. ನಿಮ್ಮ ಸೂಕ್ಶ್ಮತೆಗೆ ಇದು ಕನ್ನಡಿ. ಒಳ್ಳೆ ಆಲೋಚನೆ.